ಟೊಪ್ಪಿಯ ಮಾರುವ ಕೆಲಸವ ಮಾಡಿ
ಹೊಟ್ಟೆಯ ಹೊರೆವನು ದಾಸಪ್ಪ
ಟೊಪ್ಪಿಯ ಮಾರಲು ಪಕ್ಕದ
ಊರಿಗೆ ಸಾಗುತಲಿರಲು ದಾಸಪ್ಪ
ಬಿಸಿಲಿನ ಬೇಗೆಗೆ ಹಸಿವಿನ ತಾಪಕೆ
ಮಾಮರದಡಿಯಲಿ ಕುಳಿತಿರಲು
ಬುತ್ತಿಯ ಬಿಚ್ಚಿ ರೊಟ್ಟಿಯ ತೆಗೆದು
ಹಸಿವನು ನೀಗಿದ ದಾಸಪ್ಪ
ಮಾಮರದಲ್ಲಿ ಮಂಗಗಳೆಲ್ಲ
ಟಿರಿ ಟಿರಿಗುಟ್ಟುತ ಕುಳಿತಿರಲು
ಟೊಪ್ಪಿಯ ದಾಸಪ್ಪನ ಕಂಡು
ಹಲ್ಲನು ಗಿಂಜಿ ಕಿರಿಗುಡಲು
ಊಟದ ಬಳಿಕ ನಿದ್ದೆಯ ಮಾಡಿದ
ಮರದ ಬುಡದಲಿ ದಾಸಪ್ಪ
ಮರವನ್ನು ಇಳಿದು ಮಂಗಗಳೆಲ್ಲ
ಟೋಪಿಯ ಬುಟ್ಟಿಗೆ ಕೈಯಿಟ್ಟು
ಸಿಕ್ಕಿದ ಟೋಪಿಯ ತಲೆಯಲಿ ಇಟ್ಟು
ಮರದಲಿ ಕುಳಿತು ಕೀಯೆನಲು
ಎಚ್ಚರಗೊಂಡು ದಾಸಪ್ಪನು
ಬುಟ್ಟಿಯ ಒಳಗೆ ಕೈಯಿಡಲು
ಟೊಪ್ಪಿಯು ಕಾಣದೆ ಕಂಗಾಲು
ಮರದ ಮೇಲೆ ಕಪಿಗಳ ತಲೆಯಲಿ
ಟೊಪ್ಪಿಗಳೆಲ್ಲ ರಂಜಿಸಲು
ಪಕ್ಕನೆ ಉಪಾಯ ಹೊಳೆದು ದಾಸನು
ತನ್ನ ಟೊಪ್ಪಿಯ ತೆಗೆದೆಸೆಯೆ
ಕಪಿಗಳೆಲ್ಲ ಅದನೋಡುತ
ಎಸೆದವು ಟೋಪಿಯ ಸಿಕ್ಕೆಡೆಗೆ
ಎಲ್ಲ ಟೊಪ್ಪಿಯ ಕೂಡಲೇ ದಾಸನು
ಬುಟ್ಟಿಯ ಒಳಗೆ ತುಂಬಿಸುತ
ಕೂಡಲೇ ನಡೆದನು ವ್ಯಾಪಾರಕ್ಕೆನ್ನುತ
ಪಕ್ಕದ ಊರಿಗೆ ತಾ ನಗುತ !
ಮರದ ಮೇಲೆ ಕಪಿಗಳ ತಲೆಯಲಿ
ಟೊಪ್ಪಿಗಳೆಲ್ಲ ರಂಜಿಸಲು
ಪಕ್ಕನೆ ಉಪಾಯ ಹೊಳೆದು ದಾಸನು
ತನ್ನ ಟೊಪ್ಪಿಯ ತೆಗೆದೆಸೆಯೆ
ಕಪಿಗಳೆಲ್ಲ ಅದನೋಡುತ
ಎಸೆದವು ಟೋಪಿಯ ಸಿಕ್ಕೆಡೆಗೆ
ಎಲ್ಲ ಟೊಪ್ಪಿಯ ಕೂಡಲೇ ದಾಸನು
ಬುಟ್ಟಿಯ ಒಳಗೆ ತುಂಬಿಸುತ
ಕೂಡಲೇ ನಡೆದನು ವ್ಯಾಪಾರಕ್ಕೆನ್ನುತ
ಪಕ್ಕದ ಊರಿಗೆ ತಾ ನಗುತ !
(ಕವಿ : ಸುಬ್ರಹ್ಮಣ್ಯ ಭಟ್ )
No comments:
Post a Comment